
ಶ್ರೀ ಕೋಮರಾಯ ಚಾಮುಂಡೇಶ್ವರಿ ದೈವಸ್ಥಾನ, ಉದ್ಯಾವರ
ದೈವಸ್ಥಾನವು ರಾಷ್ಟ್ರೀಯ ಹೆದ್ದಾರಿ 17 ರ ಉದ್ಯಾವರ ಮಾಡದ ಹತ್ತಿರವಿದೆ. ಇದು 'ಆಪೆಂದ್'ನ ಕುಟುಂಬಸ್ಥರ ದೈವಸ್ಥಾನವಾಗಿದ್ದು ರಸ್ತೆ ಪಕ್ಕದಲ್ಲಿ ಇರುವುದರಿಂದ ಭಕ್ತರಿಗೆ ತುಂಬಾ ಅನುಕೂಲ ಸ್ಥಿತಿಯಲ್ಲಿದೆ. ಇವರ ನಾಗಬ್ರಹ್ಮರ ಸೇವೆಯು ಮಂಜೇಶ್ವರ ಗುತ್ತು ಸಮೀಪದ ಬಯಲಿನಲ್ಲಿ ನಡೆಯುವುದು.
ಹಿನ್ನೆಲೆ : ಈ ದೈವಸ್ಥಾನಕ್ಕೆ ಸುಮಾರು 500 ವರ್ಷಗಳ ಹಿಂದಿನ ಇತಿಹಾಸವಿದೆ. ಹಿಂದಿನ ಕಾಲದಲ್ಲಿ ಕೊರಗು ತನಿಯ ದೈವವು ಮಾಯಾ ರೂಪದಲ್ಲಿ ದನದ (ಕಬುಳಿ) ಕರುಳನ್ನು ಕುತ್ತಿಗೆಗೆ ಹಾಕಿ ಅರಸು ದೈವಗಳ ಮುಂದೆ ನಿಂತಿತಂತೆ. ಆ ಸಂದರ್ಭದಲ್ಲಿ ಶ್ರೀ ಕೋಮರಾಮ ದೈವವು ಕೊರಗು ತನಿಯ ದೈವವನ್ನು ಉದ್ಯಾವರದ ಎರಡು ಪಕ್ಕದಿಂದ ಓಡಿಸಿತಂತೆ. ಇದರಿಂದ ಸಂತುಷ್ಟರಾದ ಅರಸು ದೈವಗಳು ನಿನ್ನ ನಂಬಿರುವ ಕುಟುಂಬಸ್ಥರಿಂದ ನಮ್ಮ ಮಾಡದ ಪೂರ್ವದ ಬಡಗು ಭಾಗದಲ್ಲಿ ನೆಲೆಸಿ ಭಕ್ತರನ್ನು ಹರಸು ಎಂದು ಬಂಗಾರದ ಸಿರಿವಾಳಿನಿಂದ ಅಪ್ಪಣೆಯನ್ನು ಕೊಟ್ಟಿರುತ್ತಾರಂತೆ ಎಂದು ಗುರು ಹಿರಿಯರಿಂದ ಮತ್ತು ಪಾಡ್ಡನಗಳಿಂದ ತಿಳಿದು ಬಂದಿರುತ್ತದೆ. ಈಗಲೂ ಕೂಡ ನೇಮೋತ್ಸವಕ್ಕೆ ದಿನ ನಿಘಂಟು ಮಾಡುವ ದಿವಸ ತಮ್ಮ ದೈವದ ಪಾತ್ರಿಯವರ ವಸತಿಯಲ್ಲಿ ಕಾಣಿಕೆಗಳನ್ನು ಇಟ್ಟು ಅನುಮತಿಯನ್ನು ಪಡೆಯುವ ಸಂಪ್ರದಾಯ ಈಗಲೂ ಇದೆ.